ಜಯಕಾಂತಲ -
ಸ್ಟರ್‍ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ವೃಕ್ಷ. ಭಟಲಪಿನಾರಿ ಪರ್ಯಾಯ ನಾಮ. ಸ್ಟರ್‍ಕ್ಯೂಲಿಯ ಫೀಟಿಡ ಇದರ ಶಾಸ್ತ್ರೀಯ ಹೆಸರು. ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ ಹಾಗೂ ಭಾರತಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಜಯಕಾಂತಲ ಸುಮಾರು 6-12 ಮೀ. ಎತ್ತರಕ್ಕೆ ಬೆಳೆಯುತ್ತದೆ. ರಂಬೆಗಳೆಲ್ಲ ವಿಶಾಲವಾಗಿ ಹರಡುವುದರಿಂದ ಮರ ಸುಂದರವಾಗಿ ಕಾಣುತ್ತದೆ. ಹೂಗಳು ಬಿಳಿ ಬಣ್ಣದವು; ಅರಳಿದಾಗ ಒಂದು ಬಗೆಯ ತೀಕ್ಷ್ಣ ವಾಸನೆ ಬೀರುತ್ತವೆ. ಕಾಯಿಯ ಆಕಾರ ದೋಣಿಯಂತೆ. ಬಣ್ಣ ಎಳೆಯಾಗಿದ್ದಾಗ ಹಸಿರು, ಬಲಿತಾಗ ಕೆಂಪು. ಜಯಕಾಂತಲಕ್ಕೆ ಉದ್ಯಾನಪ್ರಾಮುಖ್ಯವೊಂದೇ ಅಲ್ಲದೆ ಔಷಧಿಯ ಮಹತ್ತ್ವವೂ ಉಂಟು. ಧೂಪಕವಾಗಿ ಇದನ್ನು ಬಳಸಲಾಗುತ್ತದೆ. ತುರಿ ಮತ್ತು ಕೆಲವು ಚರ್ಮರೋಗಗಳಲ್ಲಿ ಉಪಯುಕ್ತವೆನಿಸಿದೆ. ಬರಗಾಲದಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವುದುಂಟು. ಇದರ ತೊಗಟೆಯಿಂದ ಪಡೆಯುವ ನಾರಿನಿಂದ ಹಗ್ಗ ಹೊಸೆಯುತ್ತಾರೆ. ಚೌಬೀನೆಯಿಂದ ಹಗುರವಾದ ಉಪಕರಣಗಳನ್ನು ತಯಾರಿಸಬಹುದು.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ